ಕೋನಿ
ಲ್ಯಾಗೊಮಾರ್ಫ ಗಣದ (ಮೊಲ ಮುಂತಾದುವುಗಳನ್ನೊಳಗೊಂಡ) ಅಕೊಟೋನಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಅಕೊಟೋನ ಪ್ರಿನ್ಸೆಪ್ಸ್ ಇದರ ವೈಜ್ಞಾನಿಕ ನಾಮ. ರಷ್ಯ, ಕೊರಿಯ, ಟಿಬೆಟ್, ಇರಾನ್, ಆಪ್ಘಾನಿಸ್ತಾನ್, ಉತ್ತರ ಅಮೆರಿಕದ ರಾಕಿ ಪರ್ವತಗಳಲ್ಲಿ ಇದು ಕಂಡುಬರುತ್ತದೆ. ಬೆಟ್ಟಗುಡ್ಡಗಳಲ್ಲೆ ಇದರ ವಾಸ.   				 (ಎಸ್.ಎನ್.ಕೆ.ಯು.)

ಗಿನಿ ಹಂದಿಗಿಂತ ಚಿಕ್ಕ ಗಾತ್ರದ ಈ ಪ್ರಾಣಿಯ ಉದ್ದ ಸುಮಾರು 6", ತೂಕ ಸು.130 ಗ್ರಾಂ. ನೋಡಲು ಪುಟ್ಟ ಮೊಲದಂತೆಯೇ ಕಂಡರೂ ಇದಕ್ಕೆ ಮೊಲಕ್ಕಿರುವಂಥ ದೊಡ್ಡ ಕಿವಿಗಳಿಲ್ಲ, ಬಾಲವೂ ಇಲ್ಲ. ಮೈಮೇಲೆಲ್ಲ ಮೃದುವಾದ ದಟ್ಟವಾದ ತುಪ್ಪಳವಿದೆ. ಬಣ್ಣ ಬೂದುಮಿಶ್ರಿತ ಕಂದು. ಕೈಕಾಲುಗಳು ಚಿಕ್ಕವು. ಅಂಗಾಲಿನ ಮೇಲೆ ದಟ್ಟವಾದ ತುಪ್ಪಳವಿದೆ. ಗಂಡುಕೋನಿಯ ವೃಷಣಗಳು ಬೆದೆಗಾಲವನ್ನು ಬಿಟ್ಟು ಉಳಿದ ಕಾಲದಲ್ಲಿ ಉದರಭಾಗದಲ್ಲಿ ಹುದುಗಿರುತ್ತವೆ. ಕೋನಿ ಸಿಳ್ಳು ಹಾಕಿದಂತೆ ಕೂಗುತ್ತದೆ. ಬೆಟ್ಟಪ್ರದೇಶಗಳಲ್ಲಿ ವಾಸಿಸುವ ಕೋನಿ ಕಲ್ಲುಗಳ ಪೊಟರೆಗಳಲ್ಲೂ ಬಯಲು ಇಲ್ಲವೆ ಮರುಭೂಮಿಗಳಲ್ಲಿ ವಾಸಿಸುವಂಥದು. ನೆಲವನ್ನು ತೋಡಿ ಮಾಡಿಕೊಂಡ ಬಿಲಗಳಲ್ಲೂ ವಾಸಿಸುತ್ತದೆ. ಸಸ್ಯಾಹಾರಿಯಾದ ಕೋನಿ ಹುಲ್ಲು, ಜೊಂಡು, ಚಿಗುರು ಮುಂತಾದವನ್ನು ತಿನ್ನುತ್ತದೆ. ಇದರ ಒಂದು ವಿಶಿಷ್ಟ ಲಕ್ಷಣವೆಂದರೆ ಚಳಿಗಾಲಕ್ಕೆಂದು ಆಹಾರವನ್ನು ಶೇಖರಿಸಿಡುವುದು. ಬೇಸಗೆಯ ಕೊನೆಯ ಹೊತ್ತಿಗೆ ಹುಲ್ಲು ಮುಂತಾದ ವಸ್ತುಗಳನ್ನು ಆಯ್ದು ಕಲ್ಲುಗಳ ಮೇಲಕ್ಕೆ ಕೊಡೊಯ್ದು ಬಿಸಿಲಿನಲ್ಲಿ ಒಣಗಿಸಿ ಒಣಮೇವು ಮಾಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಆಹಾರದ ಅಭಾವವಿದ್ದಾಗ ಇದನ್ನೇ ತಿನ್ನುತ್ತ ಕಾಲಕಳೆಯುತ್ತದೆ. ಹುಲ್ಲನ್ನು ಒಣಗಿಸುತ್ತಿರುವಾಗ ಮಳೆಬರುವ ಸೂಚನೆ ಕಂಡುಬಂದರೆ ಒಂದು ಸ್ಥಳದಲ್ಲಿ ವಾಸಿಸುವ ಎಲ್ಲ ಕೋನಿಗಳೂ ಒಟ್ಟುಗೂಡಿ ಹುಲ್ಲನ್ನೆಲ್ಲ ತಮ್ಮ ಗೂಡಿನ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದು ಹುಲ್ಲು ನೆನೆಯದಂತೆ ಕಾಪಾಡುತ್ತವೆ.

ಕೋನಿಗಳಲ್ಲಿ ಇನ್ನೊಂದು ಸೋಜಿಗವನ್ನು ಕಾಣಬಹುದು. ರಾತ್ರಿವೇಳೆ ಇವು ಕಪ್ಪು ಬಣ್ಣದ ಸ್ನಿಗ್ಧವಾದ ಹಿಕ್ಕೆಗಳನ್ನು ವಿಸರ್ಜಿಸುತ್ತವೆ. ಹಿಕ್ಕೆಗಳ ಸುತ್ತ ಲೋಳೆಯಂಥ ವಸ್ತುವಿನ ಆವರಣವೂ ಇರುತ್ತದೆ. ಕೆಲಕಾಲಾನಂತರ ಕೋನಿಗಳು ಈ ಹಿಕ್ಕೆಗಳನ್ನು ತಿಂದುಬಿಡುತ್ತವೆ. ಬಹುಶಃ ಹಿಕ್ಕೆಗಳ ಮೂಲಕ ದೇಹದಿಂದ ಹೊರಬೀಳುವ ಕೆಲವು ಅತ್ಯಾವಶ್ಯಕ ವಿಟಮಿನ್‍ಗಳÀನ್ನು ಮರಳಿ ಪಡೆಯುವುದೇ ಇದರ ಉದ್ದೇಶವಿರಬೇಕು. ಕೋನಿಗಳ ಸಂತಾನೋತ್ಪತ್ತಿಯ ಕಾಲ ಮೇ-ಸೆಪ್ಟೆಂಬರ್ ತಿಂಗಳುಗಳು. ಸೂಲಿಗೆ 3-4 ಮರಿಗಳು ಹುಟ್ಟುತ್ತವೆ. ಒಂದು ಹೆಣ್ಣು ವರ್ಷಕ್ಕೆ 2-3 ಸಲ ಈಯಬಲ್ಲುದು. ಹುಟ್ಟಿದಾಗ ಮರಿಗಳಿಗೆ ತುಪ್ಪಳ ಇರುವುದಿಲ್ಲ. ಮರಿಗಳು ಸುಮಾರು 6-7 ವಾರಗಳ ಅನಂತರ ಸ್ವತಂತ್ರ ಜೀವನ ಆರಂಭಿಸುತ್ತವೆ.                    			 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ